Anonimo
ನೈಜ ಕಥೆ - ಭಾಗ ೨
ಕಳೆದ ಭಾಗದಲ್ಲಿ ರಾಜ-ರಾಣಿ ತೀರಿಕೊಂಡ ಮೇಲೆ ರಾಜಕುಮಾರಿಯರು ಅನಾಥರಾಗಿದ್ದನ್ನು ನೋಡಿದ್ವಿ. ಈಗ ಅದರ ಮುಂದುವರಿದ ಭಾಗ...
ಆ ರಾಜ-ರಾಣಿ ತೀರಿಕೊಂಡ ಮೇಲೆ ದೊಡ್ಡ ರಾಜಕುಮಾರಿ ಮದುವೆಯಾಗಿ ಗಂಡನ ಮನೆಯಲ್ಲಿ ಹೇಗೋ ಚೆನ್ನಾಗಿದ್ದಳು. ಆದರೆ ಪುಟ್ಟ ರಾಜಕುಮಾರಿಯ ಗೋಳು ಯಾರಿಗೂ ಬೇಡ, ಅವಳು ಅತ್ಯಂತ ಕಷ್ಟದ ಪರಿಸ್ಥಿತಿಯನ್ನು ಅನುಭವಿಸುತ್ತಿದ್ದಳು. ಚಿಕ್ಕಂದಿನಿಂದಲೂ ಅವಳು ನಾನಾ ತರದ ಕಷ್ಟಗಳನ್ನು ನೋಡಿದ್ದಳು. ಅವಳ ಅಪ್ಪ-ಅಮ್ಮನಿಗೆ ಅವಳ ಮೇಲೆ ಅಷ್ಟಾಗಿ ಪ್ರೀತಿ ಇರಲಿಲ್ಲ; ಏಕೆಂದರೆ ಅವರಿಗೆ ದೊಡ್ಡ ರಾಜಕುಮಾರಿ ಎಂದರೆ ತುಂಬಾ ಇಷ್ಟವಿತ್ತು.
ಹೀಗಿರುವಾಗ, ಆ ಪುಟ್ಟ ರಾಜಕುಮಾರಿಗೆ ಒಬ್ಬ ಹುಡುಗನ ಪರಿಚಯವಾಯಿತು. ಆ ಪರಿಚಯ ಮುಂದೆ ಪ್ರೀತಿಯಾಗಿ ಬದಲಾಯಿತು. ಅವಳು ಅವನನ್ನು ಅಪಾರವಾಗಿ ಪ್ರೀತಿಸಲು ಶುರುಮಾಡಿದಳು. ವರ್ಷಗಳೇ ಕಳೆದವು, ಆ
ಹುಡುಗನೂ ಅವಳ ಜೊತೆಗಿದ್ದ. 'ಅವನು ನನ್ನವನೇ' ಎಂದು ಭಾವಿಸಿ ನಂಬಿದ್ದ ರಾಜಕುಮಾರಿಗೆ, ಆ ಹುಡುಗ ನಿಜವಾಗಿಯೂ ಒಳ್ಳೆಯವನಲ್ಲ ಎಂಬ ಸತ್ಯ ನಂತರ ಗೊತ್ತಾಯಿತು.
ಅವನು ಅವಳ ಮುಂದೆ ಚೆನ್ನಾಗಿದ್ದುಕೊಂಡೇ ಮೋಸ ಮಾಡುತ್ತಿದ್ದ. ಅವನ ಜೀವನದಲ್ಲಿ ಇನ್ನೂ ಅನೇಕ ಹುಡುಗಿಯರಿದ್ದರು. ಈ ವಿಷಯ ತಿಳಿಯುತ್ತಿದ್ದಂತೆಯೇ ಪುಟ್ಟ ರಾಜಕುಮಾರಿಯ ಮನಸ್ಸು ಸಂಪೂರ್ಣವಾಗಿ
ಒಡೆದುಹೋಯಿತು. 'ಯಾವ ಹುಡುಗನೂ ಬೇಡ' ಎಂದು ನಿರ್ಧರಿಸಿ, ಒಬ್ಬಂಟಿಯಾಗಿಯೇ ನೆಮ್ಮದಿಯಿಂದ ಇರಲು ತೀರ್ಮಾನಿಸಿದಳು.
ಆದರೆ ಅವಳ ಕಷ್ಟ ಅಲ್ಲಿಗೆ ಮುಗಿಯಲಿಲ್ಲ. ಪ್ರೀತಿಯ ಹೆಸರಿನಲ್ಲಿ ಮತ್ತೊಬ್ಬ ವ್ಯಕ್ತಿ ಅವಳ ಜೀವನಕ್ಕೆ ಬಂದ. ಅವನು ಬಣ್ಣ ಬಣ್ಣದ ಮಾತುಗಳನ್ನಾಡಿ, ಅವಳು ಮತ್ತೆ ಪ್ರೀತಿಸುವಂತೆ ಮಾಡಿದ. ರಾಜಕುಮಾರಿ ಎಷ್ಟೇ ಬೇಡವೆಂದರೂ ಆ ಹುಡುಗ ಕೇಳಲಿಲ್ಲ. ಕೊನೆಗೆ ತಾನು ಪ್ರಾಣ ಕಳೆದುಕೊಳ್ಳುವುದಾಗಿ ಹೆದರಿಸಿದಾಗ, ಸೂಕ್ಷ್ಮ ಮನಸ್ಸಿನ ರಾಜಕುಮಾರಿ ಬೇರೆ ದಾರಿಯಿಲ್ಲದೆ ಅವನನ್ನು ಒಪ್ಪಿಕೊಂಡಳು.
ಆದರೆ ಇವರ ವಿವಾಹ ದೊಡ್ಡ ರಾಜಕುಮಾರಿಯ ಗಂಡನಿಗೆ ಇಷ್ಟವಿರಲಿಲ್ಲ. "ಇನ್ನೂ ಒಳ್ಳೆಯ ಸಂಬಂಧ ಬರಬಹುದು, ಆತುರಪಡಬೇಡಿ" ಎಂದು ಅವನು ವಿರೋಧಿಸಿದ. ಆದರೂ ಪುಟ್ಟ ರಾಜಕುಮಾರಿ ಮತ್ತು ಆ ಹುಡುಗ ಪರಸ್ಪರ ಪ್ರೀತಿಸುತ್ತಿದ್ದ ಕಾರಣ, ಮದುವೆಯಾಗಲೇಬೇಕೆಂದು ನಿರ್ಧರಿಸಿದರು. ಕೊನೆಗೆ ಮದುವೆಯೂ ನಡೆಯಿತು. ಆದರೆ ಈ ಕೋಪದಿಂದ ದೊಡ್ಡ ರಾಜಕುಮಾರಿಯ ಗಂಡ ಆ ಮದುವೆಗೆ ಬರಲಿಲ್ಲ ಹಾಗೂ ಪುಟ್ಟ ರಾಜಕುಮಾರಿಯೊಂದಿಗೆ ಮಾತನಾಡುವುದನ್ನೂ ಬಿಟ್ಟ.
ದೊಡ್ಡ ರಾಜಕುಮಾರಿಯ ಗಂಡ ಹೆದರಿದ್ದ ಭಯವೇ ನಿಜವಾಯಿತು. ಆ ಪುಟ್ಟ ರಾಜಕುಮಾರಿಯನ್ನು ಅವಳ ಗಂಡನ ಮನೆಯವರು ಸರಿಯಾಗಿ ನೋಡಿಕೊಳ್ಳಲಿಲ್ಲ, ತಮ್ಮವಳೆಂದು ಸೇರಿಸಿಕೊಳ್ಳಲೂ ಇಲ್ಲ. ಅವಳ ಜೀವನ ನರಕಸಮಾನವಾಯಿತು. ಮದುವೆಯಾದ ಮೇಲೆ ಬಿಟ್ಟು ಹೋಗಲೂ ಆಗದೆ, ಜೊತೆಯಲ್ಲಿ ಇರಲೂ ಆಗದೆ ಪ್ರತಿದಿನ ಮನಸ್ಸಿನಲ್ಲೇ ಕೊರಗುತ್ತಿದ್ದಳು.
ಹೀಗೆ ಕತ್ತಲಾಗಿದ್ದ ಅವಳ ಜೀವನದಲ್ಲಿ ಒಂದು ಪುಟ್ಟ ಬೆಳಕು ಮೂಡಿತು. ಅವಳಿಗೆ ಮುದ್ದಾದ ಪುಟ್ಟ ಯುವ ರಾಜಕುಮಾರ ಹುಟ್ಟಿದ. ಆ ಮಗನೇ ಅವಳ ಇಡೀ ಪ್ರಪಂಚವಾದ. ತನ್ನ ಕಷ್ಟದ ಜೀವನ ಸರಿಹೋಗದಿದ್ದರೂ ಬೇರೆ ದಾರಿಯಿಲ್ಲದೆ ಮಗನಿಗಾಗಿ ಆ ಕುಟುಂಬದ ಜೊತೆಯೇ ಜೀವನ ಸಾಗಿಸಬೇಕಾಯಿತು.(ಮುಂದಿನ ಭಾಗದಲ್ಲಿ ಕಥೆ ಮುಂದುವರಿಯುವುದು...)